ಮಲ್ಲಿಕಾ ಕಡಿದಾಳ್ ಮಂಜಪ್ಪ
	(1920-) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಗೇಮನೆಯಲ್ಲಿ, 15-6-1920ರಲ್ಲಿ ಜನಿಸಿದ ಮಲ್ಲಿಕಾ ಕಡಿದಾಳ್ ಅವರು ಕನ್ನಡದ ಹಿರಿಯ ಲೇಖಕಿಯರಲ್ಲೊಬ್ಬರು. ತಂದೆ ಚನ್ನೆಗೌಡ ಬಾಗೇಮನೆ, ತಾಯಿ ಪಾರ್ವತಮ್ಮ, ನಿಜನಾಮ ಲಕ್ಷ್ಮೀದೇವಿ ಮಲ್ಲಿಕಾ ಎನ್ನುವ ಹೆಸರಿನಿಂದಲೇ ಪ್ರಸಿದ್ಧರಾದರು.

	ಮೊದಲು ಬೆಂಗಳೂರಿನಲ್ಲೇ ವಾಸಿಸುತ್ತಿದ್ದ ಚನ್ನೇಗೌಡ ಅವರು ವ್ಯಾಪಾರದಲ್ಲಿ ನಷ್ಟವಾದ್ದರಿಂದ ಹಳ್ಳಿಗೇ ಹಿಂತಿರುಗಿದರು. ಅಂದಿನ ಪದ್ಧತಿಯಂತೆ ಲಕ್ಷ್ಮೀದೇವಿಯವರಿಗೆ ಶಾಲಾ ಶಿಕ್ಷಣ ಸರಿಯಾಗಿ ದೊರೆಯಲಿಲ್ಲ. ಮನೆಗೆ ಬರುತ್ತಿದ್ದ ವಿದ್ಯಾವಂತ ಮೇಸ್ತ್ರಿಯಿಂದ ಮನೆಯ ಮಕ್ಕಳಿಗೆಲ್ಲ ಪ್ರೈಮರಿ ಶಾಲೆಯ ಮಟ್ಟದ ಶಿಕ್ಷಣ ದೊರೆಯಿತು. ಗಂಡು ಮಕ್ಕಳು ಬೆಂಗಳೂರಿನಲ್ಲಿ ಶಾಲೆಗೆ ಸೇರಿ ವಿದ್ಯಾಭ್ಯಾಸ ಮುಂದುವರಿಸಿದರು. ಹೆಣ್ಣು ಮಕ್ಕಳ ಸ್ಕೂಲು ಹತ್ತಿರದಲ್ಲಿ ಇರಲಿಲ್ಲವಾದ್ದರಿಂದ ಹುಡುಗಿಗೆ ಮುಂದು ಓದುವುದು ಸಾಧ್ಯವಾಗಲಿಲ್ಲ. ಲಕ್ಷ್ಮೀದೇವಿ ಮನೆಯಲ್ಲೇ ಸ್ವಂತವಾಗಿ ಅಭ್ಯಾಸ ಮಾಡಿ. ಕನ್ನಡ ಭಾಷೆಯನ್ನು ಪಳಗಿಸಿಕೊಂಡರು. ಮೊದಲು ಗ್ರಾಮಸ್ಥರಿಂದ ಕೇಳಿದ ಜನಪದ ಕಥೆಗಳಿಗೆ ಆಧುನಿಕ ರೂಪ ಕೊಟ್ಟು ಬರೆದ ವಿಶ್ವಕರ್ನಾಟಕ ಪತ್ರಿಕೆಯಲ್ಲಿ ಅಂಥ ಒಂದು ಕಥೆ ಪ್ರಕಟವಾಯಿತು. ಆನಂತರ ಒಂದು ಕವನ. ಹೀಗೇ ಸಾಹಿತ್ಯ ಕೃಷಿ ಮುಂದುವರಿಯಿತು. ಆದರೆ ಬರವಣಿಗೆಗೆ ಮನೆಯವರ ಪ್ರೋತ್ಸಾಹವೇನೂ ಸಿಗಲಿಲ್ಲ.

	ಚಿಕ್ಕ ವಯಸ್ಸಿನಲ್ಲೇ ಕಡಿದಾಳ್ ಮಂಜಪ್ಪನವರೊಡನೆ ವಿವಾಹವಾಯಿತು. ಮಂಜಪ್ಪನವರು ವಿದ್ಯಾವಂತರು. ರಾಜಕಾರಣಿಗಳು, ಮುಂದೆ ಕರ್ನಾಟಕದ ಮುಖ್ಯ ಮಂತ್ರಿಯೂ ಆಗಿದ್ದರು. ಮದುವೆಯ ನಂತರ ಲಕ್ಷೀದೇವಿಯವರು ಬೆಂಗಳೂರಿನಲ್ಲೇ ನೆಲಸಿದರು. ಸಂಸಾರ ತಾಪತ್ರಯ, ಪ್ರಸಿದ್ಧರಾದ ಪತಿಯನ್ನು ನೋಡಲೆಂದು ಬಂದು ಹೋಗುವವರು, ಮಕ್ಕಳು ಈ ಜಂಜಾಟದಲ್ಲಿ ಆಕೆಯ ಬರವಣಿಗೆ ಸಂಪೂರ್ಣ ನಿಂತೇ ಹೋಯಿತು.

	ಮಕ್ಕಳ ವಿದ್ಯಾಭ್ಯಾಸ ಮುಗಿದು, ಅವರೆಲ್ಲ ನೌಕರಿಗೆಂದು ಬೇರೆ ಬೇರೆ ಊರಿಗೆ ಹೋಗುವಷ್ಟರಲ್ಲಿ ಮಲ್ಲಿಕಾ ಅವರಿಗೆ 42 ವರ್ಷವಾಗಿತ್ತು. ಈ ವಯಸ್ಸಿನಲ್ಲೇ ಅವರು ಮತ್ತೆ ಬರೆಯಲಾರಂಭಿಸಿದರು. ಎಷ್ಟೋ ಜನ ಮಹಿಳೆಯರು ತಮ್ಮ ಮಧ್ಯವಯಸ್ಸಿನಲ್ಲೇ ಬರವಣಿಗೆಯನ್ನು ಆರಂಭಿಸುತ್ತಾರೆ. ಆದರೆ ಮೊದಲು ಬರೆಯುತ್ತಿದ್ದವರು ಅವನ್ನು ಪೂರ್ತಿ ನಿಲ್ಲಿಸಿ, ಮಧ್ಯವಯಸ್ಸಿನಲ್ಲಿ ಮತ್ತೆ ಆರಂಭಿಸುವುದು ಅಪರೂಪ. ಜೀವನಾನುಭವದಿಂದ ಕೂಡಿದ ಮಲ್ಲಿಕಾ ಅವರ ಮೊದಲ ಕಾದಂಬರಿ “ಜೀವನಗಂಗಾ” ಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯಿತು.

	ಆನಂತರ ಮಲ್ಲಿಕಾ ಅವರು ವಿಪುಲವಾಗಿ ಕೃತಿಗಳನ್ನು ರಚಿಸಿದ್ದಾರೆ. ಆರು ಕಾದಂಬರಿಗಳು ಆರು ಕಥಾ ಸಂಕಲನಗಳು ಎಂಟು ಕವನ ಸಂಕಲನ, ಒಂದು ನಾಟಕ, ಏಳು ಶಿಶು ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಇತರ ಐದು ಪುಸ್ತಕಗಳು, ಹೀಗೆ ಒಟ್ಟು 54 ಪುಸ್ತಕಗಳನ್ನು ಮಲ್ಲಿಕಾ ಅವರು ಪ್ರಕಟಿಸಿದ್ದಾರೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಸ್ವಾಮಿ ವಿವೇಕಾನಂದರನ್ನು ಕುರಿತ 1274 ಪುಟಗಳ ಒಂದು ಮಹಾಕಾವ್ಯವನ್ನು ಮಲ್ಲಿಕಾ ರಚಿಸಿದ್ದಾರೆ. ಇದಕ್ಕಾಗಿ ಐದು ವರ್ಷಕಾಲ ಸತತವಾಗಿ ಪರಿಶ್ರಮ ಪಟ್ಟಿದ್ದಾರೆ. ಕನ್ನಡದಲ್ಲಿ ಮಹಾಕಾವ್ಯ ಬರೆದ ಮೊದಲ ಮಹಿಳೆ ಎನ್ನುವ ಕೀರ್ತಿಗೆ ಮಲ್ಲಿಕಾ ಭಾಜನರಾಗಿದ್ದಾರೆ. ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರ ಕೊಡ ಮಾಡುವ “ದಾನ ಚಿಂತಾಮಣಿ” (ಅತ್ತಿಮಬ್ಬೆ) ಪ್ರಶಸ್ತಿಯೂ (1999) ಲಭ್ಯವಾಗಿದೆ.

	ಮಲ್ಲಿಕಾ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಇಟ್ಟು ಪ್ರತಿವರ್ಷ ಒಬ್ಬ ಮಹಿಳೆಯ ಉತ್ತಮ ಕೃತಿಗೆ “ಮಲ್ಲಿಕಾ ಪ್ರಶಸ್ತಿ” ಬರುವಂತೆ ವ್ಯವಸ್ಥೆ ಮಾಡಿದ್ದಾರೆ.

	ಬರವಣಿಗೆಯಲ್ಲದೆ, ಕುಶಲ ಕಲೆ, ತೋಟಗಾರಿಕೆಯಲ್ಲೂ ಮಲ್ಲಿಕಾ ಅವರಿಗೆ ಆಸಕ್ತಿ ಇದೆ.

										
(ಎಚ್.ಎಸ್.ಪಾರ್ವತಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ